ದಾವೀದನ ಕೃತಜ್ಞತಾ ಪ್ರಾರ್ಥನೆ

18ಅನಂತರ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು, “ಕರ್ತನಾದ, ಯೆಹೋವನೇ, ನಾನೆಷ್ಟರವನು? ನನ್ನ ಮನೆ ಎಷ್ಟರದು? ನೀನು ನನ್ನನ್ನು ಇಲ್ಲಿಯವರೆಗೂ ತಂದಿದ್ದಿಯಲ್ಲಾ. 19ಕರ್ತನೇ, ಯೆಹೋವನೇ! ಇದು ನಿನ್ನ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನನ್ನ ಮುಂದಿನ ಸಂತಾನದ ವಿಷಯದಲ್ಲಿಯೂ ವಾಗ್ದಾನ ಮಾಡಿರುವೆ. ಕರ್ತನೇ, ಯೆಹೋವನೇ! ನೀನು ಮಾನವರಾದ ನಮ್ಮೊಂದಿಗೆ ಹೀಗೆ ವರ್ತಿಸುವುದು ಎಂಥಾ ಭಾಗ್ಯ. 20ಕರ್ತನೇ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ನಾನು ಇನ್ನೇನು ಹೇಳಲಿ? 21ನೀನು ನಿನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೋಸ್ಕರ, ನಿನ್ನ ಇಷ್ಟಾನುಸಾರವಾಗಿ ಈ ಎಲ್ಲಾ ಮಹತ್ಕಾರ್ಯಗಳನ್ನು ನಡಿಸಿ, ಅವುಗಳ ಅನುಭವಗಳನ್ನು ನಿನ್ನ ಸೇವಕನಿಗೆ ಉಂಟುಮಾಡದ್ದೀ. 22ದೇವರೇ, ಯೆಹೋವನೇ! ನೀನೇ ಮಹೋನ್ನತನು. ನಿನ್ನ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ನೀನು ನಮಗೆ ನೀಡಿದ್ದೆಲ್ಲವನ್ನು ಆಲೋಚಿಸಿ ನೋಡಿದರೆ ನಿನ್ನ ಹೊರತು ದೇವರೇ ಇಲ್ಲವೆಂಬುದು ನಿಶ್ಚಯ. 23ನಿನ್ನ ಇಸ್ರಾಯೇಲಿನ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವುದಿದೆ? ನೀನೇ ಹೋಗಿ ಅದನ್ನು ವಿಮೋಚಿಸಿ, ಸ್ವಪ್ರಜೆಯನ್ನಾಗಿ ಮಾಡಿಕೊಂಡು, ನಿನ್ನ ಹೆಸರನ್ನು ಪ್ರಸಿದ್ಧಪಡಿಸಿಕೊಂಡಿದ್ದಿ, ಐಗುಪ್ತರು ಮೊದಲಾದ ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ, ರಕ್ಷಿಸಿ, ಅವರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡಿಸಿದಿ. 24ಇಸ್ರಾಯೇಲರು ಸದಾಕಾಲವೂ ನಿನ್ನ ಪ್ರಜೆಯಾಗಿರಬೇಕೆಂದು ನಿರ್ಣಯಿಸಿದ ಯೆಹೋವನೇ, ನೀನು ಅವರಿಗೆ ದೇವರಾದಿ. 25ದೇವರೇ, ಯೆಹೋವನೇ! ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನು ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸು. ಅದು ಸದಾ ಸ್ಥಿರವಾಗಿರಲಿ. 26ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲರ ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ. 27ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ನಿನ್ನ ಸೇವಕನಾದ ನನಗೆ ‘ನಾನು ನಿನಗೋಸ್ಕರ ಮನೆ ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ಈ ಪ್ರಕಾರ ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು. 28ಕರ್ತನೇ, ಯೆಹೋವನೇ! ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ. ನಿನ್ನ ವಾಕ್ಯವು ಸತ್ಯವಾದದ್ದು. 29ಆದುದರಿಂದ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸು. ಸದಾಕಾಲವೂ ಅದರ ಮೇಲೆ ನಿನ್ನ ಕಟಾಕ್ಷವಿರಲಿ. ಕರ್ತನೇ, ಯೆಹೋವನೇ! ವಾಗ್ದಾನ ಮಾಡಿದವನು ನೀನೇ. ನಿನ್ನ ಆಶೀರ್ವಾದದಿಂದ ನಿನ್ನ ಸೇವಕನ ಮನೆಯಲ್ಲಿ ನಿತ್ಯ ಸೌಭಾಗ್ಯವಿರಲಿ” ಎಂದು ವಿಜ್ಞಾಪಿಸಿದನು.