ಚೀಬನು ಅರಸನಿಗೆ ಆಹಾರ ತಂದದ್ದೂ
1ದಾವೀದನು ಗುಡ್ಡದ ತುದಿಯ ಆಚೆಗೆ ಹೋದ ಕೂಡಲೆ ಮೆಫೀಬೋಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳನ್ನೂ, ನೂರು ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ, ನೂರು ಅಂಜೂರ ಹಣ್ಣುಗಳನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು. 2ಅರಸನು ಚೀಬನನ್ನು, “ಇವುಗಳನ್ನು ಯಾಕೆ ತಂದಿ?” ಎಂದು ಕೇಳಿದನು. ಅವನು, “ಅರಸನ ಮನೆಯವರು ಸವಾರಿಮಾಡುವುದಕ್ಕಾಗಿ ಕತ್ತೆಗಳನ್ನು, ಆಳುಗಳು ತಿನ್ನುವುದಕ್ಕಾಗಿ ಹಣ್ಣು ಮತ್ತು ರೊಟ್ಟಿಗಳನ್ನು, ಅರಣ್ಯದಲ್ಲಿ ದಣಿದವರು ಕುಡಿಯುವುದಕ್ಕಾಗಿ ದ್ರಾಕ್ಷಾರಸವನ್ನು ತಂದಿದ್ದೇನೆ” ಎಂದು ಉತ್ತರಕೊಟ್ಟನು. 3ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು 4ಆಗ ಅರಸನು ಅವನಿಗೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಲು ಅವನು, “ಅರಸನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನನ್ನ ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.


