ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ
3ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ ಸ್ತೋತ್ರಸಲ್ಲಿಸುತ್ತೇನೆ. 4ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ. 5ನಿನ್ನಲ್ಲಿರುವ ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
6ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ. 7ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.
8ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು. 9ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ, 10ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.
11ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು. 12ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು ಆತನು ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ. 13ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು. 14ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.
15ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ. 16ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡದೆ, 17ರೋಮಾಪುರಕ್ಕೆ ಬಂದಕೂಡಲೆ ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು. 18ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.
1ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು. 2ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು. 3ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು. 4ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ. 5ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ. 6ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ. 7ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು. 8ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ. 9ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. 10ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ. 11ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ
“ನಾವು ಆತನೊಡನೆ ಸತ್ತಿದ್ದರೆ
ಆತನೊಡನೆ ಜೀವಿಸುವೆವು,
12ಸಹಿಸಿಕೊಳ್ಳುವವರಾಗಿದ್ದರೆ
ಆತನೊಡನೆ ಆಳುವೆವು.
ನಾವು ಯೇಸುವಿನವರಲ್ಲವೆಂದು ಹೇಳಿದರೆ
ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
13ನಾವು ಅಪನಂಬಿಗಸ್ತರಾಗಿದ್ದರೂ
ಆತನು ನಂಬಿಗಸ್ತನಾಗಿಯೇ ಇರುವನು.
ಆತನು ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.”


