ಕೃತಜ್ಞತಾಸ್ತುತಿ ಮತ್ತು ಪ್ರಾರ್ಥನೆ
3ನಿಮಗೋಸ್ಕರ ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. 4ನೀವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ. 5ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ. 6ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿನದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ. 7ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ. 8ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.
9ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮೀಕ ಗ್ರಹಿಕೆಯಿಂದಲೂ ಜ್ಞಾನದಿಂದಲೂ ದೇವರ ಚಿತ್ತದ ತಿಳಿವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ, 10ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ, 11ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ, 12ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ. 13ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು. 14ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.


