ಕ್ರಿಸ್ತನಲ್ಲಿ ಹೊಸ ಜೀವನ
ಕೊಲೊ 3:5-17
17ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. 18ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ದೂರವಾಗಿದ್ದಾರೆ. 19ಅವರು ಲಜ್ಜೆಗೆಟ್ಟವರಾಗಿ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ. 20ನೀವಾದರೋ ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ. 21ಆತನಿಂದಲೇ ಕೇಳಿ ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. 22ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. 23ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. 24ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.
25ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ. 26“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. 27ಸೈತಾನನಿಗೆ ಅವಕಾಶಕೊಡಬೇಡಿರಿ. 28ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. 29ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು. 30ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ. 31ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. 32ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.


