ಯೆಹೂದ್ಯರಂತೆ ಅನ್ಯಜನರು ಸಹ ನಂಬಿಕೆಯಿಂದ ರಕ್ಷಣೆಹೊಂದಿದ್ದಾರೆ

15ನಾವಂತೂ ಜನ್ಮತ ಯೆಹೂದ್ಯರು “ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ.” 16ಯಾವನಾದರೂ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದರಿಂದಲೇ ಹೊರತು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸುವುದರಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲವೆಂಬುದು ನಮಗೆ ತಿಳಿದಿರುವುದರಿಂದ ನಾವು ಸಹ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು. ಏಕೆಂದರೆ ಯಾರೂ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. 17ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದುವುದಕ್ಕೆ ಪ್ರಯತ್ನಿಸುತ್ತಿರುವಾಗ, ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸಹಾಯಕನಾಗಿರುವನೋ? ಎಂದಿಗೂ ಇಲ್ಲ. 18ನಾನು ಕೆಡವಿದ್ದನ್ನೇ ತಿರುಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ತೋರಿಸಿಕೊಳ್ಳುತ್ತೇನಲ್ಲಾ. 19ನಾನಂತೂ ದೇವರಿಗಾಗಿ ಜೀವಿಸುವುದಕ್ಕೋಸ್ಕರ ಧರ್ಮಶಾಸ್ತ್ರದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ. 20ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು. 21ನಾನು ದೇವರ ಕೃಪೆಯನ್ನು ತಿರಸ್ಕರಿಸುವುದಿಲ್ಲ. ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಬಹುದಾದರೆ ಕ್ರಿಸ್ತನು ಮರಣಕ್ಕೀಡಾದುದು ನಿರರ್ಥಕವೇ ಸರಿ.