ದಾಸರು ಹಾಗೂ ಮಕ್ಕಳು

21ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳಿದುಕೊಳ್ಳಬಾರದು. ಬದುಕಿಸುವುದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಅದನ್ನು ಅನುಸರಿಸುವುದರ ಮೂಲಕ ನಿಸ್ಸಂದೇಹವಾಗಿ ನೀತಿಯುಂಟಾಗುತ್ತಿತ್ತು. 22ಸಮಸ್ತ ಲೋಕವು ಪಾಪಕ್ಕೆ ಅಧೀನವಾಯಿತೆಂದು ಪವಿತ್ರಗ್ರಂಥವು ಸ್ಪಷ್ಪೀಕರಿಸುತ್ತದೆ. ಹೀಗಿರುವುದರಿಂದ ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ.

23ಆದರೆ ಯೇಸು ಕ್ರಿಸ್ತನ ನಂಬಿಕೆಯಲ್ಲಿ ಜೀವಿಸುವ ಕಾಲ ಬರುವುದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವುದಕ್ಕಾಗಿ ಮೋಶೆಯ ಧರ್ಮಶಾಸ್ತ್ರದಿಂದ ನಾವು ಬಂಧಿಸಲ್ಪಟ್ಟಿದ್ದೆವು. 24ನಾವು ನಂಬಿಕೆಯಿಂದ ಯೇಸು ಕ್ರಿಸ್ತನಲ್ಲಿ ನೀತಿವಂತರೆಂಬ ನಿರ್ಣಯವನ್ನು ಹೊಂದುವ ಕಾಲ ಬರುವ ತನಕ, ಮೋಶೆಯ ಧರ್ಮಶಾಸ್ತ್ರವು ನಮ್ಮನ್ನು ಮುನ್ನಡೆಸುವ ಪಾಲಕನಂತಾಗಿತ್ತು. 25ಆದರೆ ಈಗ ಕ್ರಿಸ್ತ ನಂಬಿಕೆಯು ಬಂದಿರಲಾಗಿ ನಾವು ಮುನ್ನಡೆಸುವಂಥ ಧರ್ಮಶಾಸ್ತ್ರದ ಹತೋಟಿಯಲ್ಲಿ ಇಲ್ಲ. 26ಹಾಗೆ ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿದ್ದೀರಿ.

27ಹೇಗೆಂದರೆ ಕ್ರಿಸ್ತನಲ್ಲಿ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿದ್ದೀರಿ. 28ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ. 29ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ವಂಶದವರಾಗಿ ಹಾಗೂ ದೇವರ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.

1ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು. 2ತಂದೆಯು ಗೊತ್ತುಮಾಡಿದ ಸಮಯದವರೆಗೂ ಪಾಲಕರ ಮತ್ತು ಕಾರ್ಯನಿರ್ವಾಹಕರ ಅಧೀನದಲ್ಲಿರುವನು. 3ಹಾಗೆಯೇ ನಾವು ಸಹ ಬಾಲಕರಾಗಿದ್ದಾಗ ಲೋಕದ ಮೂಲತತ್ವಗಳಿಗೆ ಅಧೀನರಾಗಿದ್ದೆವು. 4-5ಆದರೆ ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡಿಸಬೇಕೆಂತಲೂ, ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, ಧರ್ಮಶಾಸ್ತ್ರಾಧೀನನಾಗಿಯೂ ಬಂದನು. 6ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. 7ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ವಾರಸುದಾರನು ಆಗಿದ್ದೀ.