ಎಫ್ರಾಯೀಮ್ಯರು ಗಿದ್ಯೋನನೊಡನೆ ಕಲಹಮಾಡಿದ್ದು
1ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ, “ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರಕೋಪದಿಂದ ಜಗಳವಾಡಿದರು. 2ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸಮಾನವಾಗುವಂತದ್ದು ನಾನೇನು ಮಾಡಿದೆ? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ, ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ? 3ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿ ಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ?” ಎಂದನು. ಈ ಮಾತುಗಳನ್ನು ಕೇಳಿದಾಗ ಅವರ ಸಿಟ್ಟಿಳಿಯಿತು.


