ಗಿದ್ಯೋನನು ಜೆಬಹ, ಚಲ್ಮುನ್ನರನ್ನು ಕೊಂದದ್ದು

4ಗಿದ್ಯೋನನು ಅವನ ಸಂಗಡ ಇದ್ದ ಮುನ್ನೂರು ಜನರು ಬಹಳ ದಣಿದವರಾಗಿದ್ದರೂ, ಹಿಂದಟ್ಟುತ್ತಾ ಯೊರ್ದನನ್ನು ದಾಟಿ ಸುಖೋತಿಗೆ ಬಂದರು. 5ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ, ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ, ಚಲ್ಮುನ್ನರನ್ನು ಹಿಂದಟ್ಟುತ್ತಾ ಇದ್ದೇನೆ” ಅಂದನು. 6ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ನೀನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?” ಎಂದು ಉತ್ತರಕೊಟ್ಟರು. 7ಆಗ ಗಿದ್ಯೋನನು ಅವರಿಗೆ, “ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಕಾಡಿನಲ್ಲಿರುವ ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸುವೆನು” ಎಂದು ಹೇಳಿದನು. 8ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು. 9ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಬುರುಜನ್ನು ಕೆಡವಿಬಿಡುವೆನು” ಅಂದನು.

10ಜೆಬಹ, ಚಲ್ಮುನ್ನರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಮೂಡಣದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ. 11ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು. 12ಜೆಬಹನೂ ಮತ್ತು ಚಲ್ಮುನ್ನನೂ ಓಡಿಹೋಗಲಾಗಿ, ಅವರನ್ನು ಹಿಂದಟ್ಟಿ ಹಿಡಿದು, ಅವರ ಸೈನ್ಯವನ್ನು ಚದರಿಸಿಬಿಟ್ಟನು.

13ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದು, 14ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು, ಆ ಊರಿನ ಮುಖಂಡರೂ, ಹಿರಿಯರೂ ಯಾರಾರೆಂದು ವಿಚಾರಿಸಲು ಅವನು ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆದುಕೊಟ್ಟನು. 15ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “ನಾವು ದಣಿದಿರುವ ನಿನ್ನ ಸೈನಿಕರಿಗೋಸ್ಕರ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ಕೈಕಟ್ಟಿ ಸ್ವಾಧೀನಮಾಡಿಕೊಂಡಿದ್ದೀಯೋ? ಎಂದು ನನ್ನನ್ನು ನಿಂದಿಸಿದಿರಲ್ಲಾ; 16ನೋಡಿರಿ, ಅವರು ಇಲ್ಲಿರುತ್ತಾರೆ” ಎಂದು ಹೇಳಿ ಊರಿನ ಹಿರಿಯರನ್ನೂ, ಮುಖಂಡರನ್ನೂ, ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು. 17ಮತ್ತು ಪೆನೂವೇಲಿನ ಬುರುಜನ್ನು ಕೆಡವಿಬಿಟ್ಟು ಆ ಊರಿನ ಜನರನ್ನು ಸಂಹರಿಸಿದನು.

18ಅವನು ಜೆಬಹ, ಚಲ್ಮುನ್ನರನ್ನು, “ನೀವು ತಾಬೋರದಲ್ಲಿ ಕೊಂದುಹಾಕಿದ ಮನುಷ್ಯರು ಹೇಗಿದ್ದರು?” ಎಂದು ಕೇಳಲಾಗಿ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು” ಎಂದು ಉತ್ತರಕೊಟ್ಟರು. 19ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಯೆಹೋವನಾಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿ 20ತನ್ನ ಹಿರೀ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು” ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ. 21ಆಗ ಜೆಬಹನೂ ಮತ್ತು ಚಲ್ಮುನ್ನನೂ ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮನ್ನು ಕೊಂದುಹಾಕು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದಲ್ಲಾ” ಅನ್ನಲು ಅವನೆದ್ದು ಜೆಬಹ, ಚಲ್ಮುನ್ನರನ್ನು ಕೊಂದುಹಾಕಿ, ಅವರ ಒಂಟೆಗಳ ಕೊರಳಿನಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.