ಗಿದ್ಯೋನನ ಮರಣ
29ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು. 30ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು. 31ಅವನಿಗೆ ಶೆಕೆಮಿನಲ್ಲಿದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗನು ಹುಟ್ಟಲು, ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು. 32ಯೋವಾಷನ ಮಗನಾದ ಗಿದ್ಯೋನನು ದಿನತುಂಬಿದ ಮುದುಕನಾಗಿ ಮರಣ ಹೊಂದಲು, ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿಯು ಅವನ ತಂದೆಯಾದ ಯೋವಾಷನದಾಗಿತ್ತು. 33ಗಿದ್ಯೋನನು ಸತ್ತನಂತರ ಇಸ್ರಾಯೇಲರು ದೈವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್‌ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು. 34ಸುತ್ತಣ ಎಲ್ಲಾ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಯೆಹೋವನನ್ನು ಮರೆತುಬಿಟ್ಟರು. 35ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಅವರು ನೆನಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.


