ಯೋತಾಮನ ಸಾಮ್ಯ
7ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು.
8“ಒಮ್ಮೆ, ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಎಣ್ಣೆಯ ಮರದ ಬಳಿಗೆ ಬಂದು, ‘ನೀನು ಬಂದು ನಮಗೆ ಅರಸನಾಗು’ ಅಂದವು. 9ಆಗ ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಗೋಸ್ಕರ ದೇವತೆಗಳೂ, ಮನುಷ್ಯರು ನನ್ನನ್ನು ಘನಪಡಿಸುತ್ತಾರೆ; ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಅಂದಿತು. 10ತರುವಾಯ ಅವು ಅಂಜೂರ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು 11ಅದು, ‘ನಾನು ನನ್ನ ಶ್ರೇಷ್ಠವಾದ ಮಧುರಫಲದಾನವನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು. 12ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು 13ಅದು ಅವುಗಳಿಗೆ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮನುಷ್ಯರಿಗೂ ಆನಂದಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು. 14ಕೊನೆಗೆ ಎಲ್ಲಾ ಮರಗಳು ಮುಳ್ಳುಗಿಡದ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಅನ್ನಲು 15ಅದು, ‘ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡುವುದು’ ಎಂದಿತು.
16“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ? 17ನನ್ನ ತಂದೆಯು ತನ್ನ ಜೀವದ ಆಶೆಯನ್ನು ತೊರೆದು, ಹೋರಾಡಿ, ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲಾ. 18ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ, ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ. 19ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ, ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲಿ ಆನಂದಿಸಿರಿ; ಅವನು ನಿಮ್ಮಲ್ಲಿ ಆನಂದಿಸಲಿ. 20ಇಲ್ಲವಾದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ, ಮಿಲ್ಲೋ ಕೋಟೆಯವರನ್ನೂ ದಹಿಸಿಬಿಡಲಿ; ಶೆಕೆಮಿನವರಿಂದಲೂ, ಮಿಲ್ಲೋ ಕೋಟೆಯವರಿಂದಲೂ ಬೆಂಕಿಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ” ಎಂದನು. 21ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು.


