ಶೆಕೆಮಿನವರು ಅಬೀಮೆಲೆಕನಿಗೆ ವಿರುದ್ಧ ತಿರುಗಿಬಿದ್ದರು
22ಅಬೀಮೆಲೆಕನು ಇಸ್ರಾಯೇಲರನ್ನು ಮೂರು ವರ್ಷ ಆಳಿದ ನಂತರ 23ಯೆಹೋವನು ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ಮಾಡಿದನು. ಅವರು ಅವನಿಗೆ ದ್ರೋಹಮಾಡಿದರು. 24ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದುಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೆಯೂ ಬರುವುದಕ್ಕೆ ಕಾರಣವಾಯಿತು. 25ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆ ಮಾಡಿಕೊಳ್ಳುತ್ತಿದ್ದರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು.
26ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬುವನು ತನ್ನ ಬಂಧುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸವಿಟ್ಟರು. 27ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು. 28ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರ ಸೇವೆಯನ್ನು ಮಾಡಲಿ. 29ಈ ಜನರ ಮೇಲೆ ನನಗೆ ಅಧಿಕಾರವಿದ್ದಿದ್ದರೆ ಅಬೀಮೆಲೆಕನನ್ನು ಓಡಿಸಿಬಿಡುತ್ತಿದ್ದೆನು” ಎಂದು ಹೇಳಿ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ” ಎಂದು ಕೊಚ್ಚಿಕೊಂಡನು. 30ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ, ಕೋಪಗೊಂಡು ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ, 31“ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಂಬಿಸುತ್ತಿದ್ದಾರೆ. 32ಆದುದರಿಂದ ನೀನು ಈ ರಾತ್ರಿಯೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು. ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು. ಅವನೂ ಅವನ ಜೊತೆಯಲ್ಲಿರುವವರೂ 33ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು” ಎಂದು ಹೇಳಿಸಿದನು. 34ಅಬೀಮೆಲೆಕನೂ, ಅವನ ಜನರೂ ರಾತ್ರಿಯಲ್ಲೇ ಹೊರಟು ಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿಕಾಯುತ್ತಿದ್ದರು. 35ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು. 36ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ” ಎಂದು ಹೇಳಿದನು. ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ” ಅನ್ನಲು 37ಅವನು ತಿರುಗಿ, “ನೋಡು, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ” ಅಂದನು. 38ಆಗ ಜೆಬುಲನು ಅವನಿಗೆ, “ಈಗ ನಿನ್ನ ಬಾಯೆಲ್ಲಿದೆ? ಅಬೀಮೆಲೆಕನು ಎಷ್ಟರವನು? ನಾವು ಅವನನ್ನು ಯಾಕೆ ಸೇವಿಸಬೇಕು ಎಂದು ಕೊಚ್ಚಿಕೊಂಡಿಯಲ್ಲಾ; ಅವರು ನೀನು ತಿರಸ್ಕರಿಸಿದ ಜನರಲ್ಲವೋ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ” ಎಂದು ಹೇಳಿದನು. 39ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು. 40ಆದರೆ ಅಬೀಮೆಲೆಕನಿಗೆ ಬೆನ್ನು ತೋರಿಸಿ ಓಡಿಹೋಗಲು, ಅವನು ಇವನನ್ನು ಹಿಂದಟ್ಟಿದನು. ಊರುಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು. 41ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಮಾಡಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಓಡಿಸಿಬಿಟ್ಟನು.
42ಮರುದಿನ ಜನರು ಬೈಲಿಗೆ ಹೊರಟು ಬಂದರು; 43ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ಕರೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೇ, ಅಲ್ಲಿಂದ ಎದ್ದು ಅವರನ್ನು ಹೊಡೆದನು. 44ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು. 45ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ, ಪಟ್ಟಣವನ್ನು ಸ್ವಾಧೀನಮಾಡಿಕೊಂಡು, ಅದರ ಜನರನ್ನೆಲ್ಲಾ ಸಂಹರಿಸಿ, ಊರನ್ನು ಕೆಡವಿಬಿಟ್ಟು, ಅಲ್ಲಿ ಉಪ್ಪನ್ನು ಎರಚಿಬಿಟ್ಟನು. 46ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್‌ಬೆರೀತೆ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು. 47ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ 48ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿ ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಳ್ಳಲು 49ಅವರೂ ಅದರಂತೆಯೇ ಮಾಡಿ, ಅವನ ಹಿಂದೆ ಹೋಗಿ, ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ, ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್ ಕೋಟೆಯವರೆಲ್ಲರೂ ಸತ್ತರು. ಅವರ ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.


