ಅಬೀಮೆಲೆಕನ ಮರಣ

50ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ ಮುತ್ತಿಗೆಹಾಕಿ ಅದನ್ನು ಹಿಡಿದನು. 51ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಬುರುಜು ಇತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ, ಅದರೊಳಗೆ ಹೊಕ್ಕು, ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು. 52ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಬುರುಜಿನ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋಗಲು, 53ಒಬ್ಬ ಸ್ತ್ರೀಯು ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ, ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು. 54ಅವನು ಕೂಡಲೆ ತನ್ನ ಆಯುಧ ಹೊರುವವನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ನಾನು ಹೆಂಗಸಿನ ಕೈಯಿಂದ ಸತ್ತನೆಂದು ಜನರು ಹೇಳಾರು” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು. 55ಅಬೀಮೆಲೆಕನು ಸತ್ತು ಹೋದದ್ದನ್ನು ಕಂಡು ಇಸ್ರಾಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.

56ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ, ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದನು. 57ಶೆಕೆಮಿನವರಿಗಾದರೋ ಅವರ ದುಷ್ಟತನವನ್ನು ಅವರ ತಲೆಯ ಮೇಲೆಯೇ ಬರಮಾಡಿದನು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನು ಇವರ ವಿಷಯದಲ್ಲಿ ನುಡಿದ ಶಾಪವು ನೆರವೇರಿತು.