ಯೆಪ್ತಾಹನು ಅಮ್ಮೋನಿಯರನ್ನು ಸೋಲಿಸಿದ್ದು

29ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರುಗಿ ಗಿಲ್ಯಾದಿನ ಮಿಚ್ಪೆಗೆ ಬಂದು, ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. 30ಇದಲ್ಲದೆ ಅವನು ಯೆಹೋವನಿಗೆ, “ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ 31ನಾನು ಸುರಕ್ಷಿತವಾಗಿ ಮನೆಗೆ ಸೇರುವಾಗ ನನ್ನನ್ನು ಎದುರುಗೊಳ್ಳುವುದಕ್ಕಾಗಿ ನನ್ನ ಮನೆಯ ಬಾಗಿಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಯಜ್ಞವಾಗಿ ಅರ್ಪಿಸುವೆನು” ಎಂದು ಹರಕೆಮಾಡಿದನು. 32ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಲು ಯೆಹೋವನು ಅವರನ್ನು ಅವನ ಕೈಗೆ ಒಪ್ಪಿಸಿದನು. 33ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿಬಿಟ್ಟನು. ಹೀಗೆ ದೊಡ್ಡ ಜಯವಾಗಿ ಅಮ್ಮೋನಿಯರು ಇಸ್ರಾಯೇಲರ ಮುಂದೆ ತಗ್ಗಿಸಲ್ಪಟ್ಟರು.