ಯೆಪ್ತಾಹನು ಎಫ್ರಾಯೀಮ್ಯರನ್ನು ಸೋಲಿಸಿದ್ದು
1ಎಫ್ರಾಯೀಮ್ಯರು ಒಟ್ಟಿಗೆ ಸೇರಿಕೊಂಡು ಯೊರ್ದನ್ ನದಿಯನ್ನು ದಾಟಿ ಉತ್ತರದಿಕ್ಕಿನಲ್ಲಿರುವ ಚಾಫೋನಿಗೆ ಹೋಗಿ ಯೆಪ್ತಾಹನಿಗೆ, “ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ” ಅಂದರು. 2ಆಗ ಅವನು ಅವರಿಗೆ, “ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ. 3ನೀವು ಸಹಾಯಮಾಡುವುದಿಲ್ಲವೆಂದು ತಿಳಿದು ಜೀವವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆನು. ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿದನು. ಹೀಗಿರಲು ನೀವು ಈಗ ಬಂದು ನನ್ನೊಡನೆ ಕಲಹಮಾಡುವುದೇಕೆ?” ಎಂದು ಉತ್ತರಿಸಿ, 4ಗಿಲ್ಯಾದಿನವರೆಲ್ಲರನ್ನೂ ಸೇರಿಸಿಕೊಂಡು ಎಫ್ರಾಯೀಮ್ಯರಿಗೆ ವಿರೋಧವಾಗಿ ಯುದ್ಧಕ್ಕೆ ನಿಂತನು. ಆಗ ಎಫ್ರಾಯೀಮ್ಯರು “ಗಿಲ್ಯಾದ್ಯರಾದ ನೀವು, ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿದ್ದೀರಿ” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಕೋಪಗೊಂಡು ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು. 5ಇದಲ್ಲದೆ ಅವರು ಎಫ್ರಾಯೀಮಿಗೆ ಹೋಗುವ ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿಸಿರಿ ಎಂದು ಅವರನ್ನು ಕೇಳಿದರೆ ಅವರು, “ನೀನು ಎಫ್ರಾಯೀಮ್ಯನೋ” ಎಂದು ಕೇಳುವರು. 6ಅವನು ಅಲ್ಲವೆಂದರೆ ಅವನಿಗೆ, “ನೀನು ಷಿಬ್ಬೋಲೆತ್ ಎಂದು ಹೇಳು” ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ (ಕಾಲ್ನಡಿಗೆಯಿಂದ ದಾಟಬಹುದಾದ ನಿರುಳ್ಳಸ್ಥಳ) ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಲ್ವತ್ತೆರಡು ಸಾವಿರ ಜನರು ಹತರಾದರು.
7ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಾಯೇಲ್ಯರನ್ನು ಆರು ವರ್ಷ ಪಾಲಿಸಿದ ನಂತರ ಸತ್ತನು; ಅವನ ಶವವನ್ನು ಗಿಲ್ಯಾದಿನ ಒಂದು ಪಟ್ಟಣದಲ್ಲಿ ಸಮಾಧಿ ಮಾಡಿದರು.


