ಸಂಸೋನನು ಫಿಲಿಷ್ಟಿಯರ ಬೆಳೆಯನ್ನು ಹಾಳುಮಾಡಿದ್ದು

1ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ, “ನಾನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗುತ್ತೇನೆ” ಅಂದನು. ಅದಕ್ಕೆ ಅವನು, “ಹೋಗಬಾರದು; 2ನೀನು ನಿಜವಾಗಿ ಆಕೆಯನ್ನು ಹಗೆಮಾಡುತ್ತೀಯೆಂದು ತಿಳಿದು ಅವಳನ್ನು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ” ಅಂದನು. 3ಆಗ ಸಂಸೋನನು, “ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವುದಾದರೆ ತಪ್ಪು ನನ್ನದಲ್ಲ” ಎಂದುಕೊಂಡು ಹೋಗಿ 4ಮುನ್ನೂರು ನರಿಗಳನ್ನು ಹಿಡಿದು, ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ, ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ, ಪಂಜುಗಳಿಗೆ ಬೆಂಕಿಹೊತ್ತಿಸಿ, 5ಆ ನರಿಗಳನ್ನು ಫಿಲಿಷ್ಟಿಯರ ಹೊಲಗಳಲ್ಲಿ ಬಿಟ್ಟು, ಅವರ ತೆನೆಗೂಡುಗಳನ್ನೂ, ಇನ್ನೂ ಕೊಯ್ಯದೆ ಇದ್ದ ಬೆಳೆಯನ್ನೂ, ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು. 6ಫಿಲಿಷ್ಟಿಯರು ಇದನ್ನು ಮಾಡಿದವರು ಯಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವನು ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಆಕೆಯನ್ನೂ, ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು. 7ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿತೀರಿಸದೆ ಬಿಡುವುದಿಲ್ಲ” ಎಂದು ಹೇಳಿ 8ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.