ಸಂಸೋನನ ಮರಣ
23ಶತ್ರುವಾದ ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದ ತಮ್ಮ ದೇವರಾದ ದಾಗೋನನಿಗೆ ಮಹಾಯಜ್ಞವನ್ನು ಸಮರ್ಪಿಸಿ ಸಂತೋಷಪಡಬೇಕೆಂದು ಫಿಲಿಷ್ಟಿಯ ಪ್ರಭುಗಳು ಒಟ್ಟಾಗಿ ಸೇರಿಬಂದರು. 24ಜನರು ಸಂಸೋನನನ್ನು ನೋಡಿದಾಗ,
“ನಮ್ಮ ದೇಶವನ್ನು ಹಾಳುಮಾಡಿ ನಮ್ಮಲ್ಲಿ ಅನೇಕರನ್ನು ಕೊಂದುಹಾಕಿದ ಈ ಶತ್ರುವನ್ನು
ನಮ್ಮ ದೇವರು ನಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾನೆ” ಎಂದು ಹಾಡು ಹಾಡಿ ಸಂತೋಷಿಸಿದರು.
25ಅವರು ಸಂಭ್ರಮದಲ್ಲಿದ್ದಾಗ, “ನಮ್ಮ ವಿನೋದಕ್ಕೋಸ್ಕರ ಸಂಸೋನನನ್ನು ಕರೆದುಕೊಂಡು ಬನ್ನಿರಿ” ಅಂದರು. ಅದರಂತೆಯೇ ಸಂಸೋನನನ್ನು ಸೆರೆಮನೆಯಿಂದ ಕರೆದುಕೊಂಡು ಬಂದರು. ಅವನು ಎರಡು ಸ್ತಂಭಗಳ ನಡುವೆ ನಿಂತು ವಿನೋದ ಮಾಡಬೇಕಾಯಿತು. 26ಆಗ ಸಂಸೋನನು ತನ್ನನ್ನು ಕೈಹಿಡಿದು ನಡೆಸುವ ಹುಡುಗನಿಗೆ, “ನನ್ನ ಕೈಗಳನ್ನು ಬಿಡು; ನಾನು ಕೈಯಾಡಿಸಿ ಮನೆಗೆ ಆಧಾರವಾಗಿರುವ ಸ್ತಂಭಗಳನ್ನು ಹುಡುಕಿ ಅವುಗಳಿಗೆ ಸ್ವಲ್ಪ ಒರಗಿಕೊಳ್ಳುತ್ತೇನೆ” ಅಂದನು. 27ಆ ಮನೆಯು ಸ್ತ್ರೀಪುರುಷರಿಂದ ಕಿಕ್ಕಿರಿದು ಹೋಗಿತ್ತು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು; ಸಂಸೋನನ ವಿನೋದವನ್ನು ನೋಡುವುದಕ್ಕಾಗಿ ಬಂದವರಲ್ಲಿ ಸುಮಾರು ಮೂರು ಸಾವಿರ ಮಂದಿ ಸ್ತ್ರೀಪುರುಷರು ಮಾಳಿಗೆಯ ಮೇಲಿದ್ದರು. 28ಆಗ ಸಂಸೋನನು ಯೆಹೋವನಿಗೆ, “ಕರ್ತನೇ, ಯೆಹೋವನೇ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡೂ ಕಣ್ಣುಗಳಲ್ಲಿ ಒಂದಕ್ಕೋಸ್ಕರವಾದರೂ ನಾನು ಅವರಿಗೆ ಮುಯ್ಯಿತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸು” ಎಂದು ಮೊರೆಯಿಟ್ಟು, 29ಮನೆಯ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ, ಇನ್ನೊಂದನ್ನು ಎಡಗೈಯಿಂದಲೂ ಹಿಡಿದು, ಅವುಗಳನ್ನು ಒತ್ತಿ, 30“ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆಗ ಅ ಕಟ್ಟಡವು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಾಗಿತ್ತು.
31ಅವನ ಬಂಧುಗಳೂ, ತಂದೆಯ ಮನೆಯವರೆಲ್ಲರೂ ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿದ್ದ ಅವನ ತಂದೆಯಾದ ಮಾನೋಹನ ಸಮಾಧಿಯಲ್ಲಿ ಹೂಣಿಟ್ಟರು. ಅವನು ಇಸ್ರಾಯೇಲರನ್ನು ಇಪ್ಪತ್ತು ವರ್ಷ ಪಾಲಿಸಿದ್ದನು.


