ಇಸ್ರಾಯೇಲ್ಯರು ಬೆನ್ಯಾಮೀನ್ಯರೊಂದಿಗೆ ಯುದ್ಧಮಾಡಲು ಸಿದ್ಧರಾಗಿದ್ದು

1ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ, ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲರೆಲ್ಲರೂ ಏಕಮನಸ್ಸಿನಿಂದ ಹೊರಟು ಮಿಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ಸೇರಿದರು. 2ಆ ದೇವಜನರ ಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ, ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು. 3ಇಸ್ರಾಯೇಲರು ಕೂಡಿಕೊಂಡು ಮಿಚ್ಪೆಗೆ ಬಂದಿದ್ದಾರೆಂಬ ವರ್ತಮಾನವು ಬೆನ್ಯಾಮೀನ್ಯರಿಗೆ ಮುಟ್ಟಿತು. ಇಸ್ರಾಯೇಲರು, “ಈ ದುಷ್ಟತನವು ಹೇಗೆ ನಡೆಯಿತೆಂದು ತಿಳಿಸಿರಿ” ಎಂದು ಕೇಳಲು 4ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಉಳಿದುಕೊಂಡೆನು. 5ಆ ಊರಿನ ಜನರು ನನ್ನನ್ನು ಕೊಲ್ಲಬೇಕೆಂದು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡರು, ಮತ್ತು ನನ್ನ ಉಪಪತ್ನಿಯನ್ನು ಭಂಗಪಡಿಸಿದರು, ಆಕೆಯು ಸತ್ತುಹೋದಳು. 6ಅವರು ಇಸ್ರಾಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಮತ್ತು ಕ್ರೂರ ಕೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು. 7ಇಲ್ಲಿ ಕೂಡಿರುವ ಎಲ್ಲಾ ಇಸ್ರಾಯೇಲರೇ, ಈಗ ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿರಿ” ಅಂದನು.

8ಇದನ್ನು ಕೇಳಿ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗದಿರಲಿ. 9ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. 10ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು. 11ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.

12ಅವರು ಬೆನ್ಯಾಮೀನ್ಯರ ಸಮಸ್ತ ಕುಲದವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕೃತ್ಯ ಎಂಥದು? 13ಈಗ ಗಿಬೆಯ ಊರಲ್ಲಿರುವ ಆ ದುಷ್ಟರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು. 14ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ಸನ್ನದ್ಧರಾದರು. 15ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು. 16ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು. 17ಬೆನ್ಯಾಮೀನ್ಯರಲ್ಲದ ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು; ಇವರೆಲ್ಲರೂ ವೀರರಾಗಿದ್ದರು.