ಬೆನ್ಯಾಮೀನ್ಯರೊಡನೆ ಯುದ್ಧ
18ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು. 19ಇಸ್ರಾಯೇಲ್ಯರು ಬೆಳಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು, 20ಬೆನ್ಯಾಮೀನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ಸಿದ್ಧರಾಗಿ, ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು. 21ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
22ಇಸ್ರಾಯೇಲ್ಯರು ತಿರುಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹಕಟ್ಟಿದ ಸ್ಥಳದಲ್ಲೇ ತಿರುಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
23ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ, “ನಾವು ತಿರುಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ?” ಎಂದು ಕೇಳಲು, ಆತನು, “ಹೋಗಿ ಯುದ್ಧಮಾಡಿರಿ” ಅಂದನು. 24ಆದ್ದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು. 25ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಉರುಳಿಸಿದರು.
26ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು. 27ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು; 28ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.
29ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚು ಹಾಕುವುದಕ್ಕೆ ಇರಿಸಿ, 30ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು. 31ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು. 32ಬೆನ್ಯಾಮೀನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ಅಂದುಕೊಂಡರು. ಇಸ್ರಾಯೇಲ್ಯರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ” ಎಂದು ಮಾತನಾಡಿಕೊಂಡು, 33ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‌ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರುಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನದಿಂದ ಎದ್ದು 34ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹುಘೋರವಾಯಿತು. ತಮಗೆ ಅಪಾಯವು ಒದಗಿ ಬಂದಿದೆ ಎಂಬುದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಿರಲಿಲ್ಲ. 35ಯೆಹೋವನು ಇಸ್ರಾಯೇಲರಿಗೆ ಜಯವನ್ನು ಕೊಟ್ಟಿದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾಮೀನ್ಯರ ಯೋಧರನ್ನು ಹತಮಾಡಿದರು.


