ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ
1“ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು. 2ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ. 3ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ. 4ನೀವು ನನ್ನಲ್ಲಿ ನೆಲೆಗೊಂಡಿರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೇ ತಾನೇ ಫಲಕೊಡಲಾರದೋ, ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. 5ನಾನು ದ್ರಾಕ್ಷಿಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನು ಬಹಳ ಫಲ ಕೊಡುವನು. ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. 6ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ. 7ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು. 8ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು ಮತ್ತು ನೀವು ನನ್ನ ಶಿಷ್ಯರಾಗುವಿರಿ.
9“ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ. 12ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆಯಾಗಿದೆ. 13ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. 14ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು. 15ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ. 16ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು. 17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.
18“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. 19ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. 20ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. 21ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು. 22ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ. 23ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ. 24ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ 25‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. 26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ.
1“ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ. 3ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು. 4ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.
5“ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ‘ನೀನು ಎಲ್ಲಿಗೆ ಹೋಗುತ್ತಿ?’ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವುದಿಲ್ಲ. 6ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. 7ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. 8ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು. 9ಅವರು ನನ್ನನ್ನು ನಂಬದೇ ಇರುವುದರಿಂದ ಪಾಪದ ಕುರಿತಾಗಿಯೂ 10ನಾನು ನನ್ನ ತಂದೆಯ ಬಳಿಗೆ ಹೋಗಿ, ಇನ್ನು ಮೇಲೆ ನಿಮಗೆ ಕಾಣಿಸದೆ ಇರುವುದರಿಂದ ನೀತಿಯ ಕುರಿತಾಗಿಯೂ, 11ಇಹಲೋಕಾಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತಾಗಿಯೂ, ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.
12“ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಉಂಟು, ಆದರೆ ನೀವು ಈಗ ಅವುಗಳನ್ನು ಗ್ರಹಿಸಲು ನಿಮ್ಮಲ್ಲಿ ಸಾಮರ್ಥ್ಯವಿಲ್ಲ. 13ಆದರೆ ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು. 14ಆತನು ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಯಪಡಿಸುತ್ತಾನಾದ್ದರಿಂದ ನನ್ನನ್ನೇ ಮಹಿಮೆಪಡಿಸುವನು. 15ತಂದೆಗೆ ಇರುವುದೆಲ್ಲಾ ನನ್ನದು. ಆದುದರಿಂದಲೇ ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಸುವನೆಂದು ನಾನು ಹೇಳಿದೆನು. 16ಇನ್ನು ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ” ಎಂದನು.
17ಇದನ್ನು ಕೇಳಿ ಆತನ ಶಿಷ್ಯರಲ್ಲಿ ಕೆಲವರು, “ಇದೇನು ಈತನು ಹೇಳುವ ಮಾತು? ‘ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ ಮತ್ತು ನಾನು ತಂದೆಯ ಬಳಿಗೆ ಹೋಗುತ್ತೇನೆ’ ಎನ್ನುತ್ತಾನಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು 18“‘ಸ್ವಲ್ಪ ಕಾಲವೆಂದು’ ಈತನು ಹೇಳುವ ಈ ಮಾತೇನು? ಏನು ಮಾತನಾಡುತ್ತಿದ್ದಾನೋ ನಮಗೆ ತಿಳಿಯದು” ಎಂದು ಅಂದುಕೊಳ್ಳುತ್ತಿದ್ದರು. 19ಯೇಸುವು ಇದನ್ನು ಕುರಿತು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ, “ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಇನ್ನು ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ, ಎಂದು ನಾನು ನಿಮಗೆ ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದೀರಾ? 20ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ. ಆದರೆ ಲೋಕವು ಸಂತೋಷಿಸುವುದು. ನಿಮಗೆ ದುಃಖವಾಗುವುದು ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವುದು. 21ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ. 22ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ. 23ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು. 24ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೊಂದನ್ನೂ ಕೇಳಿಕೊಳ್ಳಲಿಲ್ಲ. ಕೇಳಿಕೊಳ್ಳಿರಿ, ಆಗ ನಿಮ್ಮ ಆನಂದವು ಪರಿಪೂರ್ಣವಾಗುವ ಹಾಗೆ ನಿಮಗೆ ದೊರೆಯುವುದು.
25“ಈ ಸಂಗತಿಗಳನ್ನು ಸಾಮ್ಯರೂಪವಾಗಿ ನಿಮಗೆ ಹೇಳಿದ್ದೇನೆ, ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮೊಂದಿಗೆ ಮಾತನಾಡದೆ ತಂದೆಯ ಕುರಿತಾಗಿ ಸ್ಪಷ್ಟವಾಗಿ ತಿಳಿಸುವ ಕಾಲವು ಬರುತ್ತದೆ. 26ಆ ದಿನದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ, ನಿಮ್ಮ ಪರವಾಗಿ ನಾನು ತಂದೆಯನ್ನು ಬೇಡಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ. 27ನೀವು ನನ್ನನ್ನು ಪ್ರೀತಿಸಿ ನಾನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. 28ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ, ಪುನಃ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ” ಎಂದನು.
29ಅದಕ್ಕೆ ಆತನ ಶಿಷ್ಯರು, “ಇಗೋ, ನೀನು ಹೇಳುವ ಸಂಗತಿಯನ್ನು ಈಗ ಸಾಮ್ಯರೂಪವಾಗಿ ಹೇಳದೆ ಸ್ಪಷ್ಟವಾಗಿ ಹೇಳುತ್ತಿದ್ದೀ. 30ನೀನು ಸಮಸ್ತವನ್ನು ತಿಳಿದವನೆಂದೂ, ನಿನಗೆ ಪ್ರಶ್ನೆ ಮಾಡಬೇಕಾದ ಅಗತ್ಯವಿಲ್ಲವೆಂದೂ ಈಗ ನಮಗೆ ತಿಳಿಯಿತು. ಆದುದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೇ ಎಂದು ನಾವು ನಂಬುತ್ತೇವೆ” ಎಂದರು.
31ಅದಕ್ಕೆ ಯೇಸು, “ಈಗ ನೀವು ನಂಬುತ್ತೀರಿ. 32ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಬ್ಬಂಟಿಗನಾಗಿ ಬಿಡುವ ಸಮಯವು ಬರುತ್ತದೆ. ಹೌದು, ಅದು ಈಗಲೇ ಬಂದಿದೆ. ಆದರೂ ನಾನು ಏಕಾಂಗಿಯಲ್ಲ, ಏಕೆಂದರೆ ತಂದೆಯು ನನ್ನ ಸಂಗಡ ಇದ್ದಾನೆ. 33ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.


