ಪ್ರಥಮಫಲದ ಸಮರ್ಪಣೆ

9ಯೆಹೋವನು ಮೋಶೆಯೊಂದಿಗೆ ಮಾತನಾಡಿ, 10“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದ ನಂತರ ಅಲ್ಲಿನ ಜವೆಗೋದಿಯ ಪೈರನ್ನು ಕೊಯ್ಯುವಾಗ, ಪ್ರಥಮಫಲದ ಸಿವುಡನ್ನು ಯಾಜಕನ ಬಳಿಗೆ ತಂದು ಒಪ್ಪಿಸಬೇಕು. 11ನೀವು ದೇವರಿಗೆ ಅಂಗೀಕಾರವಾಗುವಂತೆ ಯಾಜಕನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿ ಸಮರ್ಪಿಸುವನು. ಸಬ್ಬತ್ ದಿನದ ಮರು ದಿನದಲ್ಲಿಯೇ ಅದನ್ನು ನಿವಾಳಿಸಬೇಕು. 12ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರ್ಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 13ಅದರೊಂದಿಗೆ ಮಾಡಬೇಕಾದ ಧಾನ್ಯನೈವೇದ್ಯವು ಯಾವುದೆಂದರೆ ಎಣ್ಣೆ ಬೆರೆತ ಆರು ಸೇರು ಗೋದಿಯ ಹಿಟ್ಟು. ಯೆಹೋವನಿಗೆ ಪರಿಮಳವನ್ನು ಉಂಟುಮಾಡುವುದಕ್ಕೆ ಇದನ್ನು ಬೆಂಕಿಯಲ್ಲಿ ಹೋಮಮಾಡಬೇಕು. ಅದರೊಂದಿಗೆ ಸಮರ್ಪಿಸಬೇಕಾದ ಪಾನದ್ರವ್ಯವು ಒಂದುವರೆ ಸೇರು ದ್ರಾಕ್ಷಾರಸ. 14ನೀವು ನಿಮ್ಮ ದೇವರಿಗೆ ಸಲ್ಲಿಸಬೇಕಾದದ್ದನ್ನು ತಂದು ಕೊಡುವವರೆಗೂ ಆ ವರ್ಷದ ಬೆಳೆಯ ರೊಟ್ಟಿಯನ್ನಾಗಲಿ, ಸುಟ್ಟ ತೆನೆಗಳನ್ನಾಗಲಿ ಅಥವಾ ಹಸಿತೆನೆಗಳನ್ನಾಗಲಿ ತಿನ್ನಲೇಬಾರದು. ನಿಮಗೂ, ನಿಮ್ಮ ಸಂತತಿಯವರಿಗೂ ಮತ್ತು ನಿಮ್ಮ ಎಲ್ಲಾ ವಾಸಸ್ಥಾನಗಳಲ್ಲಿಯೂ ಇದು ಶಾಶ್ವತನಿಯಮ.