ಸ್ವಜನರ ಮೇಲೆ ಯೆಹೋವನ ಪ್ರೀತಿ

1ಯೆಹೋವನು ಇಸ್ರಾಯೇಲರ ಕುರಿತು ಮಲಾಕಿಯ ಮೂಲಕ ನುಡಿದ ದೈವೋಕ್ತಿ.

2ಯೆಹೋವನು ಇಂತೆನ್ನುತ್ತಾನೆ, “ನಾನು ನಿಮ್ಮನ್ನು ಪ್ರೀತಿಸಿದ್ದೇನೆ.” ನೀವೋ “ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ?” ಅಂದುಕೊಳ್ಳುತ್ತೀರಲ್ಲಾ. ಏಸಾವನು ಯಾಕೋಬನ ಅಣ್ಣನಲ್ಲವೆ? 3“ಆದರೆ ನಾನು ಯಾಕೋಬನನ್ನು ಪ್ರೀತಿಸಿ, ಏಸಾವನನ್ನು ದ್ವೇಷಿಸಿ, ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಪಿತ್ರಾರ್ಜಿತ ಆಸ್ತಿಯನ್ನು ಕಾಡುನರಿಗಳ ಪಾಲುಮಾಡಿದ್ದೇನಷ್ಟೆ” ಇದು ಯೆಹೋವನ ನುಡಿ. 4ಹೀಗಿರಲು ಎದೋಮ್ಯರು, “ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು” ಅಂದುಕೊಂಡರೆ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಅವರು ಕಟ್ಟಿದರೂ ನಾನು ಕೆಡವಿಹಾಕುವೆನು; ಅವರು ದುಷ್ಟ ಕೇಡಿಗರು, ಯೆಹೋವನ ನಿತ್ಯ ಕೋಪಕ್ಕೆ ಗುರಿಯಾದ ಜನರೂ ಅನ್ನಿಸಿಕೊಳ್ಳುವರು. 5ನೀವೇ ಇದನ್ನು ಕಣ್ಣಾರೆ ಕಂಡು ಯೆಹೋವನು ಇಸ್ರಾಯೇಲಿನ ಮೇರೆಯ ಆಚೆಯೂ, ‘ಮಹಾ ಮಹಿಮೆಯುಳ್ಳವನು’” ಅಂದುಕೊಳ್ಳುವಿರಿ.