ನ್ಯಾಯತೀರ್ಪಿನ ದಿನ ಸನ್ನಿಹಿತ

17ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ. “ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು. ಅವರೇ ಆತನಿಗೆ ಇಷ್ಟ. ನ್ಯಾಯತೀರಿಸುವ ದೇವರು ಎಲ್ಲಿದ್ದಾನೆ?” ಎಂದು ನೀವು ಕೇಳುವುದರಿಂದ ಆತನ ಗಮನದಲ್ಲಿ ಇದ್ದೀರಿ.

1“ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. 2ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು ಅಕ್ಕಸಾಲಿಗನ ಬೆಂಕಿಗೂ, ಅಗಸನ ಸಾಬೂನಿಗೂ ಸಮಾನನಾಗಿದ್ದಾನೆ. 3ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು. 4ಆಗ ಯೆಹೂದದ ಮತ್ತು ಯೆರೂಸಲೇಮಿನ ನೈವೇದ್ಯವು, ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಯೆಹೋವನಿಗೆ ಮೆಚ್ಚಿಕೆಯಾದಂತೆ ಆಗಿರುವುದು. 5“ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. 6“ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”