ದಶಮಾಂಶ ಸಲ್ಲಿಸುವುದರಲ್ಲಿ ಮೋಸ
7“ನಿಮ್ಮ ಪೂರ್ವಿಕರ ಕಾಲದಿಂದಲೂ ನೀವು ನನ್ನ ವಿಧಿಗಳನ್ನು ಅನುಸರಿಸಿ ನಡೆಯಲ್ಲಿಲ್ಲ. ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ, ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಯಾವ ವಿಷಯದಲ್ಲಿ ತಿರುಗೋಣ?” ಎನ್ನುತ್ತೀರಿ. 8“ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ‘ನಿನ್ನಿಂದ ಏನು ಕದ್ದುಕೊಂಡಿದ್ದೇವೆ?’ ಎಂದು ಕೇಳುತ್ತೀರೋ. ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ. 9ನೀವು ಅಂದರೆ ಈ ಜನಾಂಗದವರೆಲ್ಲಾ ನನ್ನಿಂದ ಕದ್ದುಕೊಳ್ಳುವವರಾದ ಕಾರಣ ಶಾಪಗ್ರಸ್ತರಾಗಿದ್ದೀರಿ. 10ನನ್ನ ಆಲಯವು ಆಹಾರದ ಕೊರತೆಯಿಲ್ಲದಂತೆ ನೀವು ದಶಮಾಂಶವನ್ನು ಯಾವಾಗಲೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ಎಂದು ಯೆಹೋವನಾದ ನನ್ನನ್ನು ಹೀಗೆ ಪರೀಕ್ಷಿಸಿರಿ. 11ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು. ಅದು ನಿಮ್ಮ ಭೂಮಿಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷಿಯಹಣ್ಣು ತೋಟದಲ್ಲಿ ಉದುರಿಹೋಗದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ. 12“ಆಗ ಸಕಲ ಜನಾಂಗಗಳವರು ನಿಮ್ಮನ್ನು ಧನ್ಯರೆಂದು ಕೊಂಡಾಡುವರು; ನಿಮ್ಮ ದೇಶವು ಆನಂದವಾಗಿರುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.


