ಗೊಲ್ಗೊಥಾಕ್ಕೆ ಪ್ರಯಾಣ
32ಅವರು ಹೊರಕ್ಕೆ ಹೋಗುತ್ತಿರುವಾಗ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕಂಡು ಅವನನ್ನು ಬಲವಂತವಾಗಿ ಆತನ ಶಿಲುಬೆಯನ್ನು ಹೊರುವುದಕ್ಕೆ ಕರೆದುಕೊಂಡರು. 33ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ 34ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು. 35ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು; 36ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು. 37ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು; ಅದೇನೆಂದರೆ, “ಈತನು ಯೇಸು, ಯೆಹೂದ್ಯರ ಅರಸನು” ಎಂಬುದೇ. 38ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು. 39ಅಲ್ಲಿ ಹಾದುಹೋಗುತ್ತಿರುವವರು ತಲೆ ಅಲ್ಲಾಡಿಸಿ, 40“ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು. 41ಅದೇ ರೀತಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 42ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು. 43ಅವನು ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರಿಗೆ ಇಷ್ಟವಿದ್ದರೆ ಈಗ ಅವನನ್ನು ಬಿಡಿಸಲಿ; ‘ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ’” ಎಂದು ಅಣಕಿಸಿ ಮಾತನಾಡುತ್ತಿದ್ದರು. 44ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.


