ಯೇಸುವಿನ ಪುನರುತ್ಥಾನ

ಮಾರ್ಕ 16:1-10; ಲೂಕ 24:1-10; ಯೋಹಾ 20:1-18

1ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ ಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು. 2ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು. 3ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು. 5ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು; 6ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; 7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು. 8ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.