ಯೇಸು ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು
ಮಾರ್ಕ 6:30-44; ಲೂಕ 9:10-17; ಯೋಹಾ 6:1-14
13ಯೇಸು ಅದನ್ನು ಕೇಳಿ ದೋಣಿಯನ್ನು ಹತ್ತಿ ಆ ಸ್ಥಳವನ್ನು ಬಿಟ್ಟು ಅಡವಿಯ ಸ್ಥಳಕ್ಕೆ ಹೋದನು. ಇದನ್ನು ಕೇಳಿದ ಜನರು ಗುಂಪು ಗುಂಪಾಗಿ ತಮ್ಮ ತಮ್ಮ ಪಟ್ಟಣಗಳಿಂದ ಕಾಲುನಡಿಗೆಯಿಂದ ಆತನನ್ನು ಹಿಂಬಾಲಿಸಿದರು. 14ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು. 15ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು. 16ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು. 17ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ, 18ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು. 19ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು. 20ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು. 21ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.


