ಐಶ್ವರ್ಯವಂತನಾದ ಯುವಕನು

ಮಾರ್ಕ 10:17-27; ಲೂಕ 18:18-27

16ಇಗೋ ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು. 17ಆತನು ಅವನಿಗೆ, “ಒಳ್ಳೆಯದನ್ನು ಕುರಿತು ನನ್ನನ್ನು ಏಕೆ ಕೇಳುತ್ತೀಯಾ? ಒಳ್ಳೆಯವನು ಒಬ್ಬನೇ. ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. 18ಅದಕ್ಕೆ ಅವನು, “ಅವು ಯಾವುವು?” ಎಂದು ಕೇಳಲು ಯೇಸು, “ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು. 19ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸಬೇಕು” ಇವುಗಳೇ ಅಂದನು. 20ಆ ಯೌವನಸ್ಥನು ಆತನಿಗೆ, “ಇವೆಲ್ಲಕ್ಕೂ ವಿಧೇಯನಾಗಿ ನಾನು ನಡೆದುಕೊಂಡಿದ್ದೇನೆ; ಇನ್ನೂ ನನಗೇನು ಕೊರತೆಯಾಗಿರಬಹುದು?” ಎಂದು ಕೇಳಿದನು. 21ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 22ಆದರೆ ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.

23ಆಗ ಯೇಸು ತನ್ನ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ” ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 24“ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ನಿಮಗೆ ತಿರುಗಿ ಹೇಳುತ್ತೇನೆ” ಅಂದನು. 25ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು, “ಹೀಗಿದ್ದರೆ ರಕ್ಷಣೆ ಹೊಂದಲು ಯಾರಿಂದಾದೀತು?” ಎಂದು ಕೇಳಿದರು. 26ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.