ಯೇಸು ಗಲಿಲಾಯ ಸೀಮೆಯಲ್ಲಿ ಸುವಾರ್ತೆಯನ್ನು ಸಾರುವುದಕ್ಕೆ ಪ್ರಾರಂಭಮಾಡಿದ್ದು

ಮಾರ್ಕ 1:14,15; ಲೂಕ 4:14,15

12ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು. 13ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್‌ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು. 14ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಆ ಮಾತು ಏನೆಂದರೆ, 15“ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, 16ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು. 17ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.