ಪುನರುತ್ಥಾನದ ವಿಷಯವನ್ನು ಪ್ರಶ್ನಿಸಿದ್ದು
23ಅದೇ ದಿನದಲ್ಲಿ ಪುನರುತ್ಥಾನವಿಲ್ಲ ಎಂದು ವಾದಿಸುವ ಕೆಲವು ಸದ್ದುಕಾಯರು ಆತನ ಬಳಿಗೆ ಬಂದರು. 24ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’ 25ಆದರೆ ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಆಗಿ ತೀರಿಹೋದನು. ಅವನಿಗೆ ಮಕ್ಕಳಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; 26ಅದರಂತೆ ಎರಡನೆಯವನೂ ಮೂರನೆಯವನೂ ಹಾಗೆಯೇ ಏಳನೆಯವನ ವರೆಗೂ ಮಾಡಿದರು. 27ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. 28ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಪ್ರಶ್ನಿಸಿದರು. 29ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ; 30ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಅವರು ಇರುತ್ತಾರೆ. 31ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ, 32‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು. 33ಜನರ ಗುಂಪು ಅದನ್ನು ಕೇಳಿ ಆತನ ಬೋಧನೆಗೆ ಆಶ್ಚರ್ಯಪಟ್ಟರು.


