ಯೇಸು ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸಿದ್ದು
ಮಾರ್ಕ 14:32-50; ಲೂಕ 22:40-53; ಯೋಹಾ 18:1-12
36ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ, 37ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು. 38ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು. 39ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 40ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? 41ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು. 42ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 43ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು. 44ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು. 45ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ. 46ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.


