ಇಸ್ರಾಯೇಲರಿಗೆ ಮೇಘಸ್ತಂಭದ ಸೂಚನೆ

15ಇಸ್ರಾಯೇಲರು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ದಿನದಲ್ಲಿ ಮೇಘವು ದೇವದರ್ಶನದ ಗುಡಾರವನ್ನು ಆವರಿಸಿಕೊಂಡಿತು. ಅದು ಸಂಜೆಯಿಂದ ಮುಂಜಾನೆಯವರೆಗೆ ಬೆಂಕಿಯಂತೆ ಕಾಣಿಸುತ್ತಿತ್ತು. 16ನಿತ್ಯವೂ ಹಾಗೆಯೇ ಕಾಣಿಸುತ್ತಿತ್ತು; ಮೇಘವು ದೇವದರ್ಶನದ ಗುಡಾರವನ್ನು ಆವರಿಸಿಕೊಂಡಿತು. ರಾತ್ರಿವೇಳೆಯಲ್ಲಿ ಆ ಮೇಘವು ಬೆಂಕಿಯಂತೆ ಕಾಣಿಸುತ್ತಿತ್ತು. 17ಆ ಮೇಘವು ಗುಡಾರದಿಂದ ಮೇಲಕ್ಕೆ ಎದ್ದಾಗ ಇಸ್ರಾಯೇಲರು ಮುಂದಕ್ಕೆ ಪ್ರಯಾಣಮಾಡುತ್ತಿದ್ದರು. ಆ ಮೇಘವು ಎಲ್ಲಿ ನಿಲ್ಲುವುದೋ ಅಲ್ಲಿ ಇಸ್ರಾಯೇಲರು ತಮ್ಮ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. 18ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರಾಯೇಲರು ಪ್ರಯಾಣಮಾಡುತ್ತಿದ್ದರು, ಯೆಹೋವನ ಅಪ್ಪಣೆಯನ್ನು ಹೊಂದಿ ಅವರು ತಮ್ಮ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಆ ಮೇಘವು ದೇವದರ್ಶನದ ಗುಡಾರದ ಮೇಲಿರುವ ತನಕ ಅವರು ಇದ್ದ ಸ್ಥಳದಲ್ಲೇ ಇರುತ್ತಿದ್ದರು. 19ಆ ಮೇಘವು ಬಹುದಿನದವರೆಗೂ ದೇವದರ್ಶನದ ಗುಡಾರದ ಮೇಲೆ ಇರುವಾಗ ಇಸ್ರಾಯೇಲರು ಯೆಹೋವನ ಸೂಚನೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುತ್ತಿದ್ದರು. 20ಒಂದೊಂದು ವೇಳೆಯಲ್ಲಿ ಮೇಘವು ಕೆಲವು ದಿನಗಳು ಮಾತ್ರ ಗುಡಾರದ ಮೇಲೆ ನಿಂತಿರುತ್ತಿತ್ತು. ಯೆಹೋವನ ಆಜ್ಞಾನುಸಾರವಾಗಿ ಅವರು ಇಳಿದುಕೊಳ್ಳುತ್ತಿದ್ದರು. ಯೆಹೋವನ ಆಜ್ಞಾನುಸಾರವಾಗಿ ತಮ್ಮ ಡೇರೆಗಳನ್ನು ತೆಗೆದುಕೊಂಡು ಹೊರಡುತ್ತಿದ್ದರು. 21ಕೆಲವು ಸಮಯಗಳಲ್ಲಿ ಮೇಘವು ಸಾಯಂಕಾಲದಿಂದ ಬೆಳಗ್ಗಿನವರೆಗೆ ಇರುತ್ತಿತ್ತು. ಬೆಳಗ್ಗೆ ಅದು ಮೇಲಕ್ಕೆ ಏಳುವಾಗ ಜನರು ಪ್ರಯಾಣಮಾಡುತ್ತಿದ್ದರು. ಕೆಲವು ಸಮಯಗಳಲ್ಲಿ ಅದು ಹಗಲಿರುಳು ನಿಂತಿರುತ್ತಿತ್ತು. ಅದು ಯಾವಾಗ ಮೇಲೇಳುತ್ತಿತ್ತೋ ಆಗ ಜನರು ಹೊರಡುತ್ತಿದ್ದರು. 22ಆ ಮೇಘವು ದೇವದರ್ಶನದ ಗುಡಾರದ ಮೇಲೆ ನಿಂತಿರುವುದು ಎರಡು ದಿನವಾದರೂ, ಒಂದು ತಿಂಗಳಾದರೂ, ಒಂದು ವರ್ಷವಾದರೂ ಅಲ್ಲಿಯ ತನಕ ಇಸ್ರಾಯೇಲರು ಪ್ರಯಾಣಮಾಡದೆ ಅಲ್ಲೇ ಇಳಿದುಕೊಂಡಿರುತ್ತಿದ್ದರು. ಮೇಘವು ಏಳುವಾಗ ಅವರು ಹೊರಡುತ್ತಿದ್ದರು. 23ಯೆಹೋವನ ಆಜ್ಞೆಯ ಪ್ರಕಾರ ಅವರು ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಯೆಹೋವನ ಆಜ್ಞೆಯ ಪ್ರಕಾರವೇ ಅವರು ಡೇರೆಗಳನ್ನು ತೆಗೆದುಕೊಂಡು ಹೊರಡುತ್ತಿದ್ದರು. ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆಯೇ ಅವರು ಯೆಹೋವನ ಸೂಚನೆಗಳನ್ನು ಅನುಸರಿಸಿ ನಡೆಯುತ್ತಿದ್ದರು.