ಅವರು ದಾನಕ್ಕಾಗಿ ಕೃತಜ್ಞತೆ
10ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ. 11ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ. 12ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ. 13ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ. 14ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು. 15ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ. 16ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಸಹಾಯವನ್ನು ಕೊಟ್ಟುಕಳುಹಿಸಿದಿರಲ್ಲಾ. 17ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ. 18ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಹೊಂದಿದ್ದೇನೆ. ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ. 19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಗಳನ್ನೂ ನೀಗಿಸುವನು. 20ನಮ್ಮ ತಂದೆಯಾದ ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯುಂಟಾಗಲಿ. ಆಮೆನ್.


