ಇಸ್ರಾಯೇಲ್ಯರನ್ನು ದೇವರು ತಳ್ಳಿಬಿಟ್ಟದ್ದಕ್ಕೆ ಇಸ್ರಾಯೇಲ್ಯರೇ ಕಾರಣ

30ಹಾಗಾದರೆ ಏನು ಹೇಳೋಣ? ನೀತಿಯನ್ನು ಅನುಸರಿಸದ ಅನ್ಯಜನರಿಗೆ ನೀತಿಯು ಅಂದರೆ ನಂಬಿಕೆಯಿಂದುಂಟಾದ ನೀತಿಯು ದೊರಕಿತು. 31ಆದರೆ ನೀತಿಯನ್ನು ಹಿಂಬಾಲಿಸಿದ್ದ ಇಸ್ರಾಯೇಲ್ಯರು ನೀತಿಯನ್ನು ದೊರಕಿಸುವ ಧರ್ಮವನ್ನು ಹಿಡಿಯಲಾರದೆ ಹೋದರೆಂದು ಹೇಳಬೇಕು. 32ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಅನುಸರಿಸದೆ ನೇಮನಿಷ್ಠೆಗಳನ್ನು ಹಿಂಬಾಲಿಸಿದ್ದರಿಂದ, 33ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು. ಧರ್ಮಶಾಸ್ತ್ರದಲ್ಲಿ ಹೀಗೆ ಬರೆಯಲ್ಪಟ್ಟಿದೆ,

“ಇಗೋ ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ.

ಆತನಲ್ಲಿ ನಂಬಿಕೆಯಿಡುವವನು ಆಶಾಭಂಗಪಡುವುದಿಲ್ಲ” ಎಂಬುದೇ.

1ಸಹೋದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬುದೇ ನನ್ನ ಮನೋಭಿಲಾಷೆಯೂ ಮತ್ತು ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ. 2ದೇವರ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿ ಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದುದಲ್ಲ. 3ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವಂತ ನೀತಿಯನ್ನೇ; ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದುದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ. 4ನಂಬುವವರೆಲ್ಲರಿಗೆ ನೀತಿಯನ್ನು ದೊರಕಿಸಿಕೊಡುವುದಕ್ಕಾಗಿ ಕ್ರಿಸ್ತನೇ ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು. 5ಧರ್ಮಶಾಸ್ತ್ರದ ನೀತಿಯನುಸಾರ, “ಅದನ್ನು ಅನುಸರಿಸಿದವನು ಅದರಿಂದಲೇ ಜೀವಿಸುವನೆಂದು” ಮೋಶೆಯು ಬರೆಯುತ್ತಾನೆ. 6ಆದರೆ ನಂಬಿಕೆಯಿಂದುಂಟಾಗುವ ನೀತಿಯು ಈ ರೀತಿಯಾಗಿ ಹೇಳುತ್ತದೆ. “‘ಕ್ರಿಸ್ತನನ್ನು ಭೂಮಿಗಿಳಿಸಿಕೊಂಡು ಬರುವುದಕ್ಕಾಗಿ ಮೇಲಣ ಲೋಕಕ್ಕೆ ಏರಿಹೋದವರಾರು?’ 7ಎಂದಾಗಲಿ ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವುದಕ್ಕಾಗಿ ಯಾರು ಪಾತಾಳಲೋಕಕ್ಕೆ ಇಳಿದುಹೋದರು? ಎಂದಾಗಲಿ ನಿನ್ನ ಮನಸ್ಸಿನಲ್ಲಿ ಅಂದುಕೊಳ್ಳಬಾರದು.’” ಆದರೆ ಅದು ಏನನ್ನು ಹೇಳುತ್ತದೆ. 8“ದೇವರ ವಾಕ್ಯವು ನಿನ್ನ ಸಮೀಪದಲ್ಲಿಯೇ ಇದೆ; ಅದು ನಿನ್ನ ಬಾಯಲ್ಲಿಯೂ, ನಿನ್ನ ಹೃದಯದಲ್ಲಿಯೂ ಇದೆ.” ಆ ವಾಕ್ಯವು ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. 9ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ. 10ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ. 11“ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ. 12ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ. 13ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.